ಬೆಂಗಳೂರು: ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ನಮ್ಮ ಶ್ರೀ ಸಾಯಿ ಪಾರ್ಟಿ ಹಾಲ್ ನಲ್ಲಿ ಕರ್ನಾಟಕ ಜ್ಯುವೆಲರ್ಸ್ ಅಸೋಸಿಯೇಷನ್ನ ಮಹತ್ವದ ಸಭೆ ಯಶಸ್ವಿಯಾಗಿ ಜರುಗಿತು.
ಅಸೋಸಿಯೇಷನ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಟಿ.ಎ. ಶರವಣ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಆಭರಣ ಉದ್ಯಮದ ಭವಿಷ್ಯ ಮತ್ತು ಸವಾಲುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.ಈ ವೇಳೆ ಉದ್ಯಮದ ಏಳಿಗೆಗಾಗಿ ದಶಕಗಳಿಂದ ಶ್ರಮಿಸಿದ ಹಿರಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿ ಟಿ.ಎ. ಶರವಣ, ಹಿರಿಯರ ಮಾರ್ಗದರ್ಶನ ಹಾಗೂ ಅನುಭವ ನಮ್ಮ ಉದ್ಯಮಕ್ಕೆ ಭದ್ರ ಬುನಾದಿಯಾಗಿದೆ. ಅವರ ನಿಸ್ವಾರ್ಥ ಸೇವೆ ಇಂದಿನ ಪೀಳಿಗೆಗೆ ಮಾದರಿ ಎಂದು ಶ್ಲಾಘಿಸಿದರು.
ಉದ್ಯಮದ ಸಮಸ್ಯೆಗಳ ಕುರಿತು ಸಮಾಲೋಚನೆ:
ಆಭರಣ ಉದ್ಯಮವು ಪ್ರಸ್ತುತ ಎದುರಿಸುತ್ತಿರುವ ತೆರಿಗೆ ನೀತಿಗಳು, ಮಾರುಕಟ್ಟೆಯ ಏರಿಳಿತ ಹಾಗೂ ಭದ್ರತಾ ವಿಷಯಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಈ ಸಮಸ್ಯೆಗಳಿಗೆ ಸಂಘಟಿತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸರ್ಕಾರದ ಮಟ್ಟದಲ್ಲಿ ಆಭರಣೋದ್ಯಮಿಗಳ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಟಿ.ಎ. ಶರವಣ ಇದೇ ವೇಳೆ ಭರವಸೆ ನೀಡಿದರು.















