ಕುಸುಮ ಸಂಜೀವಿನಿ ಯೋಜನೆಗೆ ಚಾಲನೆ; ಹಿಮೋಫಿಲಿಯಾ ರೋಗಿಗಳ ಬದುಕಿಗೆ ಸಿಗಲಿದೆ ಹೊಸ ಆಶಾಕಿರಣ

WhatsApp
Telegram
Facebook
Twitter
LinkedIn

ಬೆಂಗಳೂರು: ಕರ್ನಾಟಕ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕ ಹಾಗೂ ಮಾನವೀಯ ಮೈಲಿಗಲ್ಲಾಗಿರುವ ಮಹತ್ವಾಕಾಂಕ್ಷಿ ಕುಸುಮ ಸಂಜೀವಿನಿ ಯೋಜನೆಗೆ ಬುಧವಾರ ಅಧಿಕೃತವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು.

ಬುಧವಾರ ನೆಹರು ತಾರಾಲಯದ ಸಿ.ವಿ. ವಿಶ್ವೇಶ್ವರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅತ್ಯಾಧುನಿಕ ರೋಗ ನಿರೋಧಕ  ಚಿಕಿತ್ಸೆ ಹಾಗೂ ರೋಗಿಗಳ ತುರ್ತು ಸಂಚಾರಕ್ಕಾಗಿ ಮೀಸಲಾದ ಉಚಿತ 108 ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು. ರಕ್ತಸ್ರಾವ ಉಂಟಾದ ನಂತರ ಚಿಕಿತ್ಸೆ ನೀಡುವ ಬದಲಾಗಿ, ರಕ್ತಸ್ರಾವವಾಗುವುದನ್ನೇ ತಡೆಯುವುದು ಈ ಯೋಜನೆಯ ಉದ್ದೇಶವಾಗಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದೀರ್ಘಕಾಲದ ರಕ್ತ ಹೆಪ್ಪುಗಟ್ಟುವಿಕೆಯ ಅಸ್ವಸ್ಥತೆಯಿಂದ ಬಳಲುತ್ತಿರುವ ಹಿಮೋಫಿಲಿಯಾ ರೋಗಿಗಳಿಗೆ ಶಾಶ್ವತ ಪರಿಹಾರ ಮತ್ತು ಘನತೆಯ ಬದುಕು ಒದಗಿಸುವುದು ಈ ಯೋಜನೆಯ  ಧ್ಯೇಯೋದ್ದೇಶವಾಗಿದೆ ಎಂದರು.

ಸಣ್ಣ ಏಟುಗಳಾದರೂ ಜೀವಭಯದ ಪರಿಸ್ಥಿತಿ ಉಂಟಾಗುವ ಸ್ಥಿತಿ ಬದಲಾಗಬೇಕು, ಹೊಸ ರೋಗನಿರೋಧಕ ಚಿಕಿತ್ಸೆಯಿಂದ ರೋಗಿಗಳು ಸಾಮಾನ್ಯರಂತೆ ಸಕ್ರಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ, ಯೋಜನೆ ಯಶಸ್ವಿಯಾಗಲು ಅಗತ್ಯವಿರುವ ಬೃಹತ್ ಅನುದಾನವನ್ನು ಸರ್ಕಾರ ಒದಗಿಸಿದೆ ಎಂದು ಈ ಸಂದರ್ಭದಲ್ಲಿ ಸ್ಮರಿಸಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಹಿಮೋಫಿಲಿಯಾ ಎ ರೋಗಿಗಳಿಗೆ ವಾರ್ಷಿಕವಾಗಿ ಸುಮಾರು ರೂ.5 ಲಕ್ಷ ವೆಚ್ಚವಾಗುವ ಸಬ್ಕ್ಯುಟೇನಿಯಸ್ ಚುಚ್ಚುಮದ್ದನ್ನು ರಾಜ್ಯ ಸರ್ಕಾರ ಉಚಿತವಾಗಿ ಒದಗಿಸುತ್ತಿದೆ ಎಂದು ತಿಳಿಸಿದರು.

ಈ ಮೊದಲು ಪದೇಪದೇ ರಕ್ತನಾಳದ ಮೂಲಕ ನೋವಿನ ಇಂಜೆಕ್ಷನ್ ಪಡೆಯಬೇಕಾಗಿದ್ದ ರೋಗಿಗಳಿಗೆ ಈಗ ತಿಂಗಳಿಗೊಮ್ಮೆ ಚರ್ಮದ ಅಡಿಯಲ್ಲಿ ಸುಲಭವಾಗಿ ಪಡೆಯಬಹುದಾದ ಚಿಕಿತ್ಸೆ ಲಭ್ಯವಾಗುತ್ತದೆ. ಸರ್ಕಾರ 42.55 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದ್ದು, ಮೊದಲ ಹಂತದಲ್ಲಿ 17 ಕೋಟಿ ರೂ. ಅನುದಾನವನ್ನು ಔಷಧಿಗಾಗಿ ಬಳಸಲಾಗುತ್ತಿದೆ. ಈಗಾಗಲೇ 2,600 ಹಿಮೋಫಿಲಿಯಾ ರೋಗಿಗಳನ್ನು ಗುರುತಿಸಿದ್ದು, 200 ಜನರಿಗೆ ಈ ಹೊಸ ಮಾದರಿಯ ಚುಚ್ಚುಮದ್ದು ನೀಡಿ ಪರೀಕ್ಷಿಸಲಾಗಿದೆ. ಈ ಯೋಜನೆ ಪರಿಣಾಮಕಾರಿಯಾಗಿರುವುದರಿಂದ ಇನ್ನೂ ಹೆಚ್ಚಿನ ಅನುದಾನ ನೀಡಲು ಸರ್ಕಾರ ಸಿದ್ದವಿದೆ ಎಂದು ತಿಳಿಸಿದರು.

ಹಿಮೋಫಿಲಿಯಾ ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ಪಡೆಯುವಂತೆ 108 ಅಂಬ್ಯುಲೆನ್ಸ್ ಸೇವೆಯನ್ನು ಮನೆಬಾಗಿಲಿಗೆ ಒದಗಿಸಲಾಗುತ್ತಿದೆ. ರಕ್ತಸ್ರಾವ ಮುಕ್ತ ಹಾಗೂ ಅಂಗವೈಕಲ್ಯ ಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ಸಂಕಲ್ಪವಾಗಿದೆ. ಈ ಯೋಜನೆ ಯಶಸ್ವಿಗೊಂಡರೆ ನಮ್ಮ ಬದುಕು ಕೂಡ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹಿಮೋಫಿಲಿಯಾ ರೋಗಿಗಳಿಗಾಗಿ ತಮ್ಮ ವೃತ್ತಿ ಜೀವನ ಮುಡಿಪಾಗಿಟ್ಟ ಕಾರಣಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ನಾಡಿನ ವೈದ್ಯರಾದ ಡಾ. ಸುರೇಶ್ ಹನಗವಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಿಮೋಫಿಲಿಯಾ ಅನುಭವಿಸುತ್ತಿರುವ ಬೆಂಗಳೂರಿನ 3 ಮಕ್ಕಳಿಗೆ ಸಾಂಕೇತಿಕವಾಗಿ ಚಿಕಿತ್ಸೆ ನೀಡಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್,  ನಿರ್ದೇಶಕ ಡಾ. ವಸಂತಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ತಜ್ಞರು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon