ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಬೈಲೂರ ಗ್ರಾಪಂ ವ್ಯಾಪ್ತಿಯಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ 3 ಕಿಮೀ ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ಆದರೆ ಈ ರಸ್ತೆಯನ್ನು ಅಲ್ಲಲ್ಲಿ ಬಿಟ್ಟು ಬಿಟ್ಟು ನಿರ್ಮಾಣ ಮಾಡಲಾಗಿರುವುದು ವಿಚಿತ್ರವಾಗಿ ಕಂಡುಬರುತ್ತಿದೆ. ಮಧ್ಯ ಮಧ್ಯ ಅಲ್ಲಲ್ಲಿ ರಸ್ತೆ ನಿರ್ಮಾಣ ಯಾಕೆ ಆಗಿಲ್ಲ ಎಂದು ಗ್ರಾಮಸ್ಥರು ತಲೆ ಕೆಡಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಒಂದು ಪಾಯಿಂಟ್ ನಿಂದ ಇನ್ನೊಂದು ಪಾಯಿಂಟ್ ವರೆಗೆ ರಸ್ತೆ ನಿರ್ಮಾಣಕ್ಕೆ ಟೆಂಡರ್ ಇರುತ್ತದೆ. ಆ ಪ್ರಕಾರ ಗುತ್ತಿಗೆದಾರರು ರಸ್ತೆ ಮಾಡುತ್ತಾರೆ. ಆದರೆ ಚೋರ್ಲಾ ಮುಖ್ಯರಸ್ತೆಯಿಂದ ಬೈಲೂರ ಗ್ರಾಮವನ್ನು ಸಂಪರ್ಕಿಸುವ ಲೋಕೋಪಯೋಗಿ ಇಲಾಖೆಗೆ ಸೇರಿದ ಮುಖ್ಯರಸ್ತೆಯನ್ನು ಅಲ್ಲಲ್ಲಿ ಗ್ಯಾಪ್ ಬಿಟ್ಟು ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಾಡುವಂತಾಗಿದೆ. ರಸ್ತೆ ನಿರ್ಮಾಣ ಮಾಡುವಾಗ ಇಂಜಿನಿಯರ್ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಇಂಜಿನಿಯರ್ ಪ್ಲಾನ್ ತಯಾರಿಸಿದಂತೆಯೇ ಗುತ್ತಿಗೆದಾರರು ಕೆಲಸ ಮಾಡುತ್ತಾರೆ. ಆದರೆ ಈ ಅದ್ಭುತ ರಸ್ತೆಯನ್ನು ಯಾವ ಬೃಹಸ್ಪತಿ ಇಂಜಿನಿಯರ್ ಪ್ಲಾನ್ ಮಾಡಿದ್ದಾರೆ ಎಂದು ತಿಳಿಯುವುದು ಅಗತ್ಯವಾಗಿದೆ.
ಇಲ್ಲಿ ಅರ್ದಂಬರ್ಧ ರೋಡ್ ಮಾಡಿ ಸಾಮಾನ್ಯ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಸಂಬಂಧಪಟ್ಟ ಇಂಜಿನಿಯರ್ ಅವರನ್ನು ಈ ಬಗ್ಗೆ ಪ್ರಶ್ನಿಸಿದರೆ, ಮಧ್ಯದಲ್ಲಿ ಬಿಟ್ಟ ರಸ್ತೆಯನ್ನು ನಂತರ ಮಾಡುತ್ತೇವೆ ಎನ್ನುತ್ತಾರೆ. ಆದರೆ ಹೀಗೆ ಅವೈಜ್ಞಾನಿಕವಾಗಿ ರಸ್ತೆ ಮಾಡುವುದು ಏಕೆ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲದಾಗಿದೆ. ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜಿನಿಯರು, ಕಾರ್ಯಕಾರಿ ಇಂಜಿನಿಯರು ಈ ರಸ್ತೆಯನ್ನು ಖುದ್ದಾಗಿ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೆಕೆಂಬುದು ಇಲ್ಲಿನ ಜನರ ಒತ್ತಾಯವಾಗಿದೆ.















