ಸಾಗರ ಕೃಷ್ಣಾ ಕೋಳೆಕರ, ಸಂಪಾದಕರು
ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಹುದ್ದೆಗಳಲ್ಲಿರುವ ಅಧಿಕಾರಿಗಳು ಹಾಗೂ ನೌಕರರು ಮುಂಬಡ್ತಿ ಪಡೆದರೆ ಕೇಂದ್ರ ಸ್ಥಾನ ಬಿಟ್ಟು ಬೇರೆ ಜಿಲ್ಲೆಗಳಿಗೆ ಉನ್ನತ ಹುದ್ದೆ ಅಲಂಕರಿಸಲು ವರ್ಗಾವಣೆಗೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಈ ಕುರಿತು ಸಾಕಷ್ಟು ನಿಯಮಾವಳಿಗಳು ಸಹ ಜಾರಿಯಲ್ಲಿವೆ. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮಸುತ್ತ ಹೋದರೆ ಬೆಳಗಾವಿ ಜಿಲ್ಲೆಯ ಸರ್ಕಾರಿ ನೌಕರರಿಗೆ ಬೇರೆಯೇ ಕಾನೂನುಗಳಿವೆಯೇ? ಅದರಲ್ಲೂ ಲೋಕೋಪಯೋಗಿ ಇಲಾಖೆಯಲ್ಲಿ ಮ್ಯೂಸಿಕಲ್ ಚೇರ್ ನೆಡೆಯುತ್ತಿದೆಯೇ? ಎನ್ನುವ ಪ್ರಶ್ನೆಗಳು ಜನಮಾನಸದಲ್ಲಿ ಮೂಡುತ್ತಿವೆ.
ಇದೇ ಮಾದರಿಯಲ್ಲಿ ಈಗ ಬೆಳಗಾವಿ ಜಿಲ್ಲೆಗೆ ಒಬ್ಬ ಚುಪಾ ರುಸ್ತುಂ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರನ ಪುನರಾಗಮನ ಆಗಿದೆ. ಈತ ಸಭ್ಯ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಾ ಒಳಗೆ ಸಿಂಡಿಕೇಟ್ ಕಟ್ಟಿಕೊಂಡು ಮುಂಬಡ್ತಿ ಪಡೆದರೂ ಬೇರೆ ಜಿಲ್ಲೆಗೆ ವರ್ಗಾವಣೆಗೊಳ್ಳದೆ ಲಾಬಿ ನಡೆಸಿ ಮತ್ತದೇ ಕಚೇರಿ ವ್ಯಾಪ್ತಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಈತನಿಗೆ ಬೆಳಗಾವಿ ಜಿಲ್ಲೆಯೇ ಬೇಕಾಗಿರುವುದು ಏತಕ್ಕೆ? ಅಕ್ಕ ಪಕ್ಕದ ಜಿಲ್ಲೆಗಳಿಗೇ ಹೋಗದೆ ಇರುವ ಕಾರಣವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ದೊರಕಬೇಕಿದೆ. ಈ ಹಿಂದೆ ಇದೇ ಹುದ್ದೆಯಲ್ಲಿದ್ದು ನಿವೃತ್ತರಾದ ಕಾರ್ಯಪಾಲಕ ಅಭಿಯಂತರರು ಸಹ ಬೆಣ್ಣೆಯ ಜೊತೆ ಜೊತೆಗೆ ತುಪ್ಪವನ್ನು ಸಹ ತಿಂದಿದ್ದಾರೆ ಎನ್ನುವ ಗುಮಾನಿಗಳು ಸಹ ಸಾಕಷ್ಟಿವೆ.
ಕರ್ನಾಟಕದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ನೇರ ನೇಮಕಾತಿಯ ಅಧಿಸೂಚನೆ ಹೊರಡಿಸಿ ಕೆ.ಪಿ.ಎಸ್.ಸಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡುತ್ತದೆ ಉಳಿದಂತೆ ಸೂಕ್ತ ಅನುಪಾತಕ್ಕೆ ಅನುಗುಣವಾಗಿ ಮುಂಬಡ್ತಿ ಪ್ರಕ್ರಿಯೆ ನಡೆಯುತ್ತದೆ. ಇನ್ನೂ ಅಲ್ಲಿಂದ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಕೇವಲ ಮುಂಬಡ್ತಿಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಮುಂಬಡ್ತಿ ವಿಚಾರದಲ್ಲಿ ಸಾಕಷ್ಟು ಲಾಬಿ ನಡೆಯುತ್ತಿದದ್ದು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದ್ದು, ಈಗ ಈ ರೀತಿಯಾಗಿ ಕಾರ್ಯಪಾಲಕ ಅಭಿಯಂತರ ಹುದ್ದೆ ಅಲಂಕರಿಸಿ ಬೇರೆ ಜಿಲ್ಲೆಗೆ ವರ್ಗಾವಣೆ ಗೊಳ್ಳದೆ ಅದೇ ಜಿಲ್ಲೆಯ ಬೇರೆ ಕಚೇರಿಗಳಿಗೆ ಅಥವಾ ಬೇರೆ ಇಲಾಖೆಯ ಸಮಾನ ಹುದ್ದೆಗೆ ನಿಯೋಜನೆಗೊಳ್ಳುತ್ತಿರುವುದು ಭ್ರಷ್ಟ ವ್ಯವಸ್ಥೆಗೆ ಕೈಗನ್ನಡಿ ಅಲ್ಲದೆ ಮತ್ತೇನು ಎನ್ನುವ ಪ್ರಶ್ನೆ ಕಾಡುವುದು ಸಹಜವಾಗಿದೆ.
ಇನ್ನು ಈ ಚುಪಾ ರುಸ್ತಂ ಆಗಮನದಿಂದ ಬೆಳಗಾವಿ ಜಿಲ್ಲೆಯಲ್ಲಿ ಕಡೆದಷ್ಟು ಬೆಣ್ಣೆಯನ್ನು ತೆಗೆಯುವ ಹಾಗೆ ಹೆಚ್ಚು ಭ್ರಷ್ಟಚಾರ ನಡೆಸಬಹುದು ಎಂದು ಇತರೆ ಅಭಿಯಂತರರ, ಅಧಿಕಾರಿಗಳ, ನೌಕರರ ಲೆಕ್ಕಾಚಾರವಾಗಿದೆ ಎನ್ನುವ ಮಾತುಗಳು ಈಗಾಗಲೆ ಕೇಳಿಬರುತ್ತಿವೆ. ಹೀಗಿದ್ದಾಗ ಪಕ್ಕದ ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಅಥವಾ ಬೇರೆ ಜಿಲ್ಲೆಗಳಿಗೆ ಇಲ್ಲಿನ ಇತರ ಲೋಕೋಪಯೋಗಿ ನೌಕರರಿಗೆ ಹೋಗುವ ಮನಸ್ಸಾದರೂ ಹೇಗೆ ಬಂದೀತು ? ಎನ್ನುವ ಪ್ರಶ್ನೆಗೆ ಉತ್ತರ ನೀಡುವವರೆ ಇಲ್ಲದಂತಾಗಿದೆ.















