ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮೀನುಗಳ ಸಂಗ್ರಹಾಲಯವನ್ನು ಉತ್ತಮವಾಗಿ ಸಿದ್ಧಪಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮೀಪದ ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯಕ್ಕೆ ಭೇಟಿ ನೀಡಿ, ಮೀನುಗಳ ಸಂಗ್ರಹಾಲಯವನ್ನು ಪರಿಶೀಲಿಸಿ ಮಾತನಾಡಿದ ಅವರು, ಪ್ರಸ್ತುತ ಮೀನುಗಳ ಸಂಗ್ರಹಾಲಯವಿರುವ ಕಟ್ಟಡ ಹಳೆಯದಾಗಿರುವುದರಿಂದ ಇದನ್ನು ನವೀಕರಣಗೊಳಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.
ಅಕ್ಕ ಕೆಫೆಗೆ ಭೇಟಿ ಪರಿಶೀಲನೆ:
ನಂತರ ಮೃಗಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಅಕ್ಕ ಕೆಫೆ ಕಟ್ಟಡವನ್ನು ಸಿಇಓ ಶಿಂಧೆ ಪರಿಶೀಲಿಸಿ, ಮುಂಬರುವ ದಿನಗಳಲ್ಲಿ ಕೆಫೆ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲು ಹಾಗೂ ಕೆಫೆ ಪ್ರಾರಂಭಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿರ್ದೇಶನ ನೀಡಿದರು.
ಸ್ವಸಹಾಯ ಸಂಘದ ಸದಸ್ಯರ ಜೊತೆ ಚರ್ಚೆ:
ಈ ಸಂದರ್ಭದಲ್ಲಿ ಹಾಜರಿದ್ದ ಹೊನಗಾ ಗ್ರಾಮದ ಎನ್.ಆರ್.ಎಲ್.ಎಮ್. ಸ್ವಸಹಾಯ ಸಂಘದ ಸದಸ್ಯರೊಂದಿಗೆ ಕೆಫೆ ಯಾವ ರೀತಿ ನಿರ್ವಹಿಸಬೇಕೆಂದು ಚರ್ಚಿಸಿದರು. ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ್, ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಸಂತೋಷ ಕೊಪ್ಪದ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಿರಣ ಘೋರ್ಪಡೆ, ಬೆಳಗಾವಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.















