ವಿದ್ಯುತ್ ನಿಗಮಗಳ ಖಾಸಗೀಕರಣ ವಿಚಾರ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ: ಡಿ.ಕೆ. ಶಿವಕುಮಾರ್

WhatsApp
Telegram
Facebook
Twitter
LinkedIn

ಬೆಂಗಳೂರು: ರಾಜ್ಯದ ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡದಿರುವ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ನೌಕರರ ಅಭಿಪ್ರಾಯವನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಸೋಮವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ವಿವಿಧ ಸಂಘಗಳ ಒಕ್ಕೂಟ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಖಾಸಗೀಕರಣದ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

2003 ರಲ್ಲಿ ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ಅವಕಾಶ ಕಲ್ಪಿಸುವ ಕಾನೂನನ್ನು ಬಿಜೆಪಿ ಸರ್ಕಾರವೇ ತಂದಿತ್ತು. ಆಗ ಅದರ ವಿರುದ್ಧ ಯಾರೂ ಧ್ವನಿ ಎತ್ತಲಿಲ್ಲ. ಈಗ ತಮ್ಮ ಬಳಿ ಬಂದು ಖಾಸಗೀಕರಣಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಲಾಗುತ್ತಿದೆ ಹೇಳಿದರು.

ವಿದ್ಯುತ್ ಮೂಲಸೌಕರ್ಯವನ್ನು ನಿರ್ಮಿಸಿದ್ದು, ಸರ್ಕಾರ ಹಾಗೂ ಇಲಾಖೆಯ ಸಿಬ್ಬಂದಿ. ಆದರೆ ಮಾತ್ರ ಖಾಸಗಿ ಕಂಪನಿಗಳಿಗೆ ಸಿಗುವಂತಾಗಬಾರದು. ಮುಂಬೈ, ದಿಲ್ಲಿ ಸೇರಿದಂತೆ ಹಲವು ನಗರಗಳಲ್ಲಿ ಖಾಸಗೀಕರಣ ನಡೆದಿರುವುದನ್ನು ಉಲ್ಲೇಖಿಸಿದರು. ನೌಕರರು ಸರ್ಕಾರದ ಬಗ್ಗೆ ಕಾಳಜಿ ವಹಿಸಿದರೆ ಸರ್ಕಾರವೂ ಅವರ ಹಿತಾಸಕ್ತಿಯನ್ನು ಕಾಪಾಡಲಿದೆ. 2028ರ ಚುನಾವಣೆಯಲ್ಲೂ ಇದೇ ರೀತಿಯ ಬೆಂಬಲ ಮುಂದುವರಿಯಬೇಕು ಎಂದು ಕರೆ ನೀಡಿದರು.

ಇಂಧನ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ಇಲಾಖೆಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳು ಜಾರಿಯಾಗಿವೆ. ತಮ್ಮ ಹಿಂದಿನ ಅವಧಿಯಲ್ಲಿ ಇಂಧನ ವನ ನಿರ್ಮಾಣ, ಸಿಬ್ಬಂದಿಯ ವೇತನ ಪರಿಷ್ಕರಣೆ ಅವಧಿಯನ್ನು ಏಳು ವರ್ಷದಿಂದ ಐದು ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಇಲಾಖೆಯಲ್ಲಿ 25 ಸಾವಿರಕ್ಕೂ ಹೆಚ್ಚು ನೇಮಕಾತಿಗಳನ್ನು ಯಾವುದೇ ಲಂಚವಿಲ್ಲದೆ ನಡೆಸಲಾಗಿದೆ ಎಂದರು.

ರಾಜ್ಯದಲ್ಲಿ ವಿದ್ಯುತ್ ವಿತರಣೆಯ ವೇಳೆ ಉಂಟಾಗುತ್ತಿದ್ದ ಇಂಧನ ಸೋರಿಕೆಯನ್ನು 19 ಪ್ರತಿಶತದಿಂದ 10 ಪ್ರತಿಶತಕ್ಕೆ ಇಳಿಸಿರುವುದು ಹಾಗೂ 2,400 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಉದ್ಯಾನ ನಿರ್ಮಾಣ ದೇಶಕ್ಕೆ ಮಾದರಿಯಾಗಿದೆ. ಬಳಿಕ ಕೇಂದ್ರ ಸರ್ಕಾರವೂ ಇದೇ ಮಾದರಿಯನ್ನು ಅನುಸರಿಸಿ ಕುಸುಮ್ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಇಂಧನ ಇಲಾಖೆ ಸಿಬ್ಬಂದಿಗಳು ಕತ್ತಲನ್ನು ದೂರ ಮಾಡುವ ಕಾಯಕ ಜೀವಿಗಳು. ಜನರ ಜೀವನದಲ್ಲಿ ವಿದ್ಯುತ್ ಸಿಬ್ಬಂದಿಯ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದು ಡಿ.ಕೆ. ಶಿವಕುಮಾರ್ ಶ್ಲಾಘಿಸಿದರು.

ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಮುಂದಿನ 25 ವರ್ಷಗಳ ವಿದ್ಯುತ್ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿದೆ. ರೈತರ ಸಹಭಾಗಿತ್ವದಲ್ಲಿ 10 ಸಾವಿರ ಎಕರೆ ಪ್ರದೇಶದಲ್ಲಿ ಸೌರ ಉದ್ಯಾನವನ ಅಭಿವೃದ್ಧಿಪಡಿಸಲಾಗಿದ್ದು, ಇನ್ನೂ 10 ಸಾವಿರ ಎಕರೆ ಭೂಮಿ ನೀಡಲು ರೈತರು ಮುಂದೆ ಬಂದಿದ್ದಾರೆ ಎಂದರು.

ಪೀಕ್ ಅವಧಿಯಲ್ಲಿ ವಿದ್ಯುತ್ ಮಾರಾಟ ಹೆಚ್ಚಿಸಿರುವುದರಿಂದ ಇಲಾಖೆಗೆ ಹೆಚ್ಚಿನ ಆದಾಯ ಲಭಿಸುತ್ತಿದ್ದು, ವಿನಿಮಯ ಆಧಾರಿತ ವಿದ್ಯುತ್ ಖರೀದಿ ಹಾಗೂ ದೀರ್ಘಾವಧಿ ಒಪ್ಪಂದಗಳ ಮೂಲಕ ರಾಜ್ಯದ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. ಇನ್ನೂ ಗೃಹಜ್ಯೋತಿ ಯೋಜನೆ ಅಡಿ 1.67 ಕೋಟಿ ಗ್ರಾಹಕರಿಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದ್ದು, ಇದಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆಗಾಗಿ 21 ಸಾವಿರ ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಕೆ. ಬಲರಾಮ್ ಮಾತನಾಡಿ, ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್ ಕ್ಷೇತ್ರದ ಬಲವರ್ಧನೆ, ನೌಕರರ ಕಲ್ಯಾಣ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಅಧ್ಯಕ್ಷ ಕೆ. ಬಲರಾಮ್,  ಕಾರ್ಯದರ್ಶಿ ಶಿವರಾಂ, ಖಜಾಂಚಿ ವರದರಾಜ್, ಇಂಜಿನಿಯರ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ದೇಸಾಯಿ ಸೇರಿದಂತೆ ಇತರರು ಇದ್ದರು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon