ಬೆಂಗಳೂರು: ಮರೆತು ಹೋಗಿರುವ ಸಿರಿಧಾನ್ಯಗಳ ಬಳಕೆಯನ್ನು ಮನೆ ಮನೆಗಳಲ್ಲಿ ಮತ್ತೆ ಪ್ರಾರಂಭಿಸಿ, ಈ ನೆಲದ ಧಾನ್ಯಗಳ ಲಾಭವನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಉಪ ನಿರ್ದೇಶಕಿ ಪಲ್ಲವಿ ಹೊನ್ನಾಪುರ ಕರೆ ನೀಡಿದರು.
2025-26 ನೇ ಸಾಲಿನ ಅಂತರಾಷ್ಟ್ರೀಯ ವಾಣಿಜ್ಯ ಮೇಳದ ಅಂಗವಾಗಿ ರಾಷ್ಟ್ರೀಯ ಅಹಾರ ಮತ್ತು ಪೌಷ್ಟಿಕ ಅಭಿಯಾನ ಯೋಜನೆಯಡಿ ಬೆಂಗಳೂರು ನಗರ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗೋಧಿ ಹಾಗೂ ಭತ್ತ ದೈನಂದಿನ ಆಹಾರದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದಂತೆ ಸಿರಿಧಾನ್ಯಗಳು ಸಹಜವಾಗಿ ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಾ ಬಂದವು. ಇದೀಗ ಮಕ್ಕಳು ರಾಗಿ ಖಾದ್ಯಗಳನ್ನು ತಿನ್ನುವುದೇ ಅಪರೂಪವಾಗಿ ಹೋಗಿದೆ. ಸಿರಿ ಧಾನ್ಯಗಳ ಹೆಸರೇ ಹಲವರಿಗೆ ತಿಳಿದಿಲ್ಲ. ಆದರೆ ಆರೋಗ್ಯ ಕಾಪಾಡಲು ಸಮತೋಲಿತ ಆಹಾರ ಸೇವನೆ ಅತ್ಯಗತ್ಯ. ಸಿರಿ ಧಾನ್ಯಗಳ ಸೇವನೆಯಿಂದ ದೇಹದ ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ನಗರ ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಸೀತಾ ಮಾತನಾಡಿ, ಕೃಷಿ ಇಲಾಖೆಯು ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚು ಬೆಳೆಯಲು ಉತ್ತೇಜನ ನೀಡುತ್ತಿದೆ. ಅದಕ್ಕೆ ಪೂರಕವಾಗಿ ಸಿರಿಧಾನ್ಯಗಳ ಸೇವನೆಯೂ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸಿರಿಧಾನ್ಯಗಳ ಖಾದ್ಯಗಳನ್ನು ತಯಾರಿಸಲು ಹೆಚ್ಚು ಉತ್ತೇಜನ ನೀಡುವ ಹಾಗೂ ಅದರ ಬಳಕೆ ಹೆಚ್ಚಿಸುವ ಅಗತ್ಯ ಕೂಡ ಇದೆ ಎಂದರು.
ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಹಾಗೂ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕೃತ ತರಬೇತಿ/ಪದವಿ/ಶಿಕ್ಷಣ ಪಡೆದವರನ್ನು ಹೊರತುಪಡಿಸಿ ರೈತರು ಮತ್ತು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಸ್ಪರ್ಧೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿದ್ದು, ವಿವಿಧ ಸಿರಿಧಾನ್ಯಗಳ ಸಿಹಿ ಮತ್ತು ಖಾರದ ಖಾದ್ಯಗಳನ್ನು ತಯಾರಿಸಿ ಪ್ರದರ್ಶಿಸಿದರು. ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಕೂಡ ಅಭ್ಯರ್ಥಿಗಳು ತಮ್ಮ ವಿಶೇಷ ತಿನಿಸುಗಳನ್ನು ತಯಾರಿಸಿ ಪ್ರದರ್ಶಿಸಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.















