ಸಾಗರ ಕೃಷ್ಣಾ ಕೋಳೆಕರ, ಸಂಪಾದಕರು
ಒಂದು ಕಾಲದಲ್ಲಿ ಭ್ರಷ್ಟರ ಹುಟ್ಟಡಗಿಸಿದ್ದ ಮತ್ತು ದೇಶದ ನಂಬರ್ 1 ಭ್ರಷ್ಟಾಚಾರ ನಿಗ್ರಹ ದಳವಾಗಿ ಗುರುತಿಸಿಕೊಂಡಿದ್ದ ಲೋಕಾಯುಕ್ತ ಸಂಸ್ಥೆ ಕಳೆದ ಕೆಲ ವರ್ಷಗಳಿಂದ ನಿದ್ರೆಯಲ್ಲಿ ಇದ್ದಂತೆ ಮತ್ತು ವ್ಯವಸ್ಥೆಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡಂತೆ ಕಂಡುಬರುತ್ತಿತ್ತು. ಆದರೆ ಸಂಸ್ಥೆಯ ಇತ್ತೀಚಿನ ನಡೆ ತನಗಂಟಿದ್ದ ಕಳಂಕವನ್ನು ದೂರವಾಗಿಸಲು ಪಣತೊಟ್ಟಂತೆ ತೋರುತ್ತಿದೆ. ದೂರುಗಳನ್ನು ದಾಖಲಿಸಿಕೊಳ್ಳುವ ವ್ಯವಸ್ಥೆಯನ್ನು ಸರಿಪಡಿಸುವುದರಿಂದ ಹಿಡಿದು ಟ್ರ್ಯಾಪ್, ರೇಡ್ ಮತ್ತು ಅಶಿಸ್ತು ತೋರುವ ಸರ್ಕಾರಿ ಅಧಿಕಾರಿಗಳ ಮೇಲಿನ ದಾಳಿಗಳನ್ನು ಸಹ ಅತ್ಯಂತ ಶಿಸ್ತುಬದ್ಧವಾಗಿ ನಡೆಸುತ್ತಿರುವುದು, ಎಲ್ಲೋ ಕಳೆದು ಹೋಗಿದ್ದ ಭರವಸೆಯನ್ನು ಮೂಡಿಸುತ್ತಿದೆ.
ಇತ್ತೀಚೆಗಷ್ಟೇ ನಡೆದ ಅಬಕಾರಿ ಇಲಾಖೆಯ ಭ್ರಷ್ಟಾಚಾರದ ವಿರುದ್ಧದ ಕಾರ್ಯಾಚರಣೆ, ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ ಮತ್ತು ತುಮಕೂರು ಸಬ್ ಇನ್ಸ್ಪೆಕ್ಟರ್ ಮೇಲಿನ ಟ್ರ್ಯಾಪ್ ಅಸ್ತ್ರ, ಬೆಳಗಾವಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರೊಬ್ಬರ ಮನೆ ಹಾಗು ಕಚೇರಿಗಳ ಮೇಲಿನ ದಾಳಿ, ರಾಜ್ಯಾದ್ಯಂತ ಹಿರಿಯ ಸರ್ಕಾರಿ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವುದಕ್ಕೆ ಪ್ರಕರಣಗಳನ್ನು ದಾಖಲಿಸಿದ್ದು, ಶಿಕ್ಷಣ ಇಲಾಖೆಯ ಕಚೇರಿಗಳ ಅವ್ಯವಸ್ಥೆಯನ್ನು ಬಯಲುಗೆಳದಿದ್ದು, ಇವೆಲ್ಲಕ್ಕಿಂತ ಮುಖ್ಯವಾಗಿ ಹಿಂದುಳಿದ ಜಿಲ್ಲೆಯಾದ ಕೊಪ್ಪಳದ ಗ್ರಾಮಗಳಲ್ಲಿನ ನೈರ್ಮಲ್ಯದ ಕುರಿತು ಮುತುವರ್ಜಿ ವಹಿಸಿದ್ದು ಮಾದರಿಯಾಗಿ ಕಂಡು ಬರುತ್ತಿವೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸಮಸ್ಯೆಗಳಿಗೆ, ಆಡಳಿತಾತ್ಮಕ ಕುಸಿತಕ್ಕೆ ಮೂಲ ಕಾರಣ ಭ್ರಷ್ಟಾಚಾರ ಎನ್ನುವುದನ್ನು ಹಲವಾರು ಸಂಘ ಸಂಸ್ಥೆಗಳು ಮಾಡಿದ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಕೇವಲ ನಮ್ಮ ರಾಜ್ಯ ಸರ್ಕಾರಿ ನೌಕರರು ಮಾತ್ರವಲ್ಲದೆ ಬಹುತೇಕ ಭಾರತದ ರಾಜ್ಯಗಳ ಜನತೆ ಈ ಪಿಡುಗಿನಿಂದಾಗಿ ರೋಸಿ ಹೋಗಿದ್ದಾರೆ. ಕೇಂದ್ರ ಸರಕಾರಿ ನೌಕರರು ಸಹ ಭ್ರಷ್ಟಾಚಾರದಲ್ಲಿ ಮಿಂದೆದ್ದು ದೇಶಕ್ಕೆ ಕಂಟಕವಾಗಿ ಪರಿಣಮಿಸಿದ್ದಾರೆ. ರಾಷ್ಟ್ರೀಯ ರಕ್ಷಣಾ ಪಡೆಗಳಲ್ಲಿ ಈ ಪ್ರಮಾಣ ಕಡಿಮೆ ಎಂದು ತೋರುತ್ತಿದ್ದರೂ ವಲಸಿಗರ ಸಮಸ್ಯೆ ಇದಕ್ಕೆ ತದ್ವಿರುದ್ಧವಾದ ವಿಚಾರವನ್ನು ನಮ್ಮ ಕಣ್ಣಮುಂದಿಡುತ್ತಿದೆ.
ನಮ್ಮ ದೇಶದ ಇತಿಹಾಸವನ್ನು ನಾವು ನೋಡುತ್ತಾ ಹೋದರು ಭ್ರಷ್ಟಾಚಾರವೆನ್ನುವುದು ದೊಡ್ಡ ದೊಡ್ಡ ಸಂಸ್ಥಾನಗಳ ಪತನಕ್ಕೆ ಅನವಶ್ಯಕ ಯುದ್ಧಗಳಿಗೆ ಕಾರಣವಾಗಿವೆ. ಪರಕೀಯರು ನಮ್ಮನ್ನು ಆಳಿದ್ದು ಸಹ ನಮ್ಮವರೇ ಕ್ಷುಲ್ಲಕ ಆಸೆಗಳಿಗೆ ಬಲಿಯಾಗಿ ರಾಷ್ಟ್ರ ಹಿತವನ್ನು ಬಲಿಕೊಟ್ಟಿದಕ್ಕಾಗಿಯೇ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಕಾಲಮಾನದಲ್ಲೂ ಜಗತ್ತಿನ ಮುಂದೆ ತಲೆ ತಗ್ಗಿಸಿದ್ದು ಭ್ರಷ್ಟ ವ್ಯವಸ್ಥೆಯಿಂದಲೇ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಸದ್ಯ ಜಗತ್ತಿನ ವಿವಿಧ ದೇಶಗಳ ಪರಿಸ್ಥಿತಿ ಮತ್ತು ಮನಸ್ಥಿತಿಯ ಅಧಃಪತನಕ್ಕೆ ಭ್ರಷ್ಟಚಾರ ಮೂಲ ಕಾರಣವಾಗಿ ಗೋಚರಿಸುತ್ತಿದೆ. ಎಲ್ಲಾ ನೈಸರ್ಗಿಕ ಖನಿಜಗಳಿಂದ ಕೂಡಿರುವ ಆಫ್ರಿಕಾದ ದೇಶಗಳಲ್ಲಿ ಕಿತ್ತು ತಿನ್ನುವ ಬಡತನಕ್ಕೆ ಸಾಂಕ್ರಾಮಿಕ ರೋಗಗಳನ್ನು ತಡೆಯದಿರುವ ಪರಿಸ್ಥಿಗೆ ಭ್ರಷ್ಟಚಾರ ಮೂಲ ಕಾರಣವಾಗಿದೆ. ಇನ್ನು ಮೊನ್ನೆ ಮೊನ್ನೆ ನಡೆದ ವೆನೆಜುವೆಲಾ ದೇಶದ ಅಧ್ಯಕ್ಷನನ್ನು ಅಮೆರಿಕಾ ಸೈನಿಕರು ಹೊತ್ತುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿರುವುದರ ಹಿಂದಿರುವುದು ಸಹ ಆ ದೇಶದ ದಶಕಗಳ ದುರಾಡಳಿತ ಭ್ರಷ್ಟಚಾರ ಕಾರಣವಾಗಿದೆ. ಇನ್ನು ಕೆಲ ತಿಂಗಳ ಹಿಂದೆಯಷ್ಟೇ ನೇಪಾಳದಲ್ಲಿ ನಡೆದ ಯುವಕರ ಹೋರಾಟಕ್ಕೆ ಭ್ರಷ್ಟಾಚಾರ ಮತ್ತು ದುರಾಡಳಿತವೇ ಕಾರಣ ಎಂದರೆ ಅತಿಶಯೋಕ್ತಿಯಲ್ಲ.
ಒಟ್ಟಿನಲ್ಲಿ ರಾಜ್ಯ, ರಾಷ್ಟ್ರ ಜನರು ಸುಭಿಕ್ಷವಾಗಿ ನೆಮ್ಮದಿಯಾಗಿ ಜೀವಿಸಬೇಕು ಎಂದರೆ ಭ್ರಷ್ಟಾಚಾರ ಮುಕ್ತಿಯೊಂದೇ ರಾಮಬಾಣವಾಗಿದೆ. ಸಾಮಾನ್ಯ ಜನರೇ ಕಾನೂನನ್ನು ಕೈಗೆತ್ತಿಕೊಳ್ಳದಿರುವಂತೆ ತಡೆಯುವುದು ಮತ್ತು ಸಂಪೂರ್ಣ ವ್ಯವಸ್ಥೆ ಹಾಳಾಗದಂತೆ ತೆಡೆಯುವುದಕ್ಕೆ ಭ್ರಷ್ಟಾಚಾರವನ್ನು ಮೂಲದಿಂದ ಕಿತ್ತೊಗೆಯಲು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಶಪಥಮಾಡಬೇಕಿದೆ. ಸದ್ಯ ಈ ನಿಟ್ಟಿನಲ್ಲಿ ಲೋಕಾಯುಕ್ತ ಪೊಲೀಸರು ಎಚ್ಚೆತ್ತು ಕಾರ್ಯೋನ್ಮುಖರಾಗಿರುವುದು ಸಾಮಾನ್ಯ ಜನರಿಗೆ ನೆಮ್ಮದಿಯನ್ನಂತೂ ತಂದು ಕೊಟ್ಟಿದೆ.















