ಮೂಕ ಪ್ರೇಕ್ಷಕರಂತಾದರಾ ಲೋಕಾಯುಕ್ತ ಪೊಲೀಸರು?

WhatsApp
Telegram
Facebook
Twitter
LinkedIn

ಸಾಗರ ಕೃಷ್ಣಾ ಕೋಳೆಕರ, ಸಂಪಾದಕರು

ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ 1984ರಲ್ಲಿ ಲೋಕಾಯುಕ್ತ ಕಾಯ್ದೆಯಡಿ ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟಲು ಲೋಕಾಯುಕ್ತ ಸಂಸ್ಥೆ ಪ್ರಾರಂಭವಾದಾಗಿನಿಂದ ಭ್ರಷ್ಟರ ಸಿಂಹ ಸ್ವಪ್ನವಾಗಿ ಕಾಡಿದ್ದು ಸುಳ್ಳಲ್ಲ. ಆದರೆ 2016 ರಲ್ಲಿ ಎಸಿಬಿ ಸ್ಥಾಪನೆಯಾಗಿ ತದನಂತರ 2022 ರಲ್ಲಿ ಮತ್ತೆ ಲೋಕಾಯುಕ್ತಕ್ಕೆ ಪರಮಾಧಿಕಾರ ದೊರತಾಗಿನಿಂದ ಅಲ್ಲಿನ ಪೊಲೀಸ್ ಅಧಿಕಾರಿಗಳು ಮೂಕ ಪ್ರೇಕ್ಷಕರ ರೀತಿ ಇರುವಂತೆ ಗೋಚರವಾಗುತ್ತಿದೆ.

ಲೋಕಾಯುಕ್ತ ಸಂಸ್ಥೆ ಪ್ರಾರಂಭವಾದ ವರ್ಷದಿಂದ ಹಲವು ಮಹತ್ತರ ಕಾರ್ಯಾಚರಣೆ ನಡೆಸಿ ಭ್ರಷ್ಟರಿಗೆ ಕಾನೂನಿನ ಅನ್ವಯ ಶಿಕ್ಷೆ ನೀಡುವ ಕೆಲಸವನ್ನು ಮಾಡುತ್ತಾ ಬಂದಿದೆ. ಇಡೀ ದೇಶದಲ್ಲಿ ಮಹಾರಾಷ್ಟ್ರ ಮೊದಲು ಲೋಕಾಯುಕ್ತವನ್ನು ಪ್ರಾರಂಭಿಸಿದ್ದರೂ, ರಾಜ್ಯದಲ್ಲಿ ಅದನ್ನು ಮೀರಿಸಿ ಕೆಲಸ ಮಾಡುವ ದಕ್ಷತೆಯನ್ನು ಇಲ್ಲಿನ ಲೋಕಾಯುಕ್ತರು, ಸಂಸ್ಥೆಯ ಹಿರಿಯ ಐಪಿಎಸ್ ಅಧಿಕಾರಿಗಳು, ಜಿಲ್ಲಾ ಲೋಕಾಯುಕ್ತ ಪೊಲೀಸರು ಮಾಡಿಕೊಂಡು ಬಂದಿದ್ದರು. ಆದರೆ ಇತ್ತೀಚಿನ ಮೂರ್ನಾಲ್ಕು ವರ್ಷದಲ್ಲಿ ಜಾಣ ಕುರುಡರಂತೆ ನಡೆದುಕೊಳ್ಳುತ್ತಿರುವುದು ಏಕೆ ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿಮೂಡಿದೆ.

ಲೋಕಾಯುಕ್ತರಾಗಿ ನೇಮಕಗೊಂಡಿದ್ದ ನ್ಯಾಯಮೂರ್ತಿಗಳಾದ ಎನ್ ವೆಂಕಟಾಚಲಯ್ಯ ಹಾಗೂ ಸಂತೋಷ್ ಹೆಗ್ಡೆ ಅವರ ಅಧಿಕಾರ ಅವಧಿಯಲ್ಲಿ ಸಂಸ್ಥೆ ದೇಶದ ಅತ್ಯುನ್ನತ ಭ್ರಷ್ಟಾಚಾರ ನಿರ್ಮೂಲನ ದಳವಾಗಿ ಗುರುತಿಸಿಕೊಂಡಿತ್ತು. ಆದರೆ ತದನಂತರದ ಕಾಲದಲ್ಲಿ ಸಂಸ್ಥೆಯ ಅಧಿಕಾರವನ್ನು ಮೊಟಕುಗೊಳಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಕೈಯಿಟ್ಟು ಎಸಿಬಿ ಸ್ಥಾಪಿಸಿ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಿತ್ತು. ಆದರೆ ಹೈಕೋರ್ಟ್ ಮಧ್ಯಪ್ರವೇಶಿಸಿ ಎಸಿಬಿ ಅನ್ನು ರದ್ದುಗೊಳಿಸಿ ಮತ್ತೆ ಲೋಕಾಯುಕ್ತಕ್ಕೆ ಪರಮಾಧಿಕಾರವನ್ನು ನೀಡಿತ್ತು. ಆದರೆ ಬೆಂಗಳೂರಿನ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಲೋಕಾಯುಕ್ತ ಪೊಲೀಸ್ ಕಚೇರಿಗಳು ಪರಮ ಭ್ರಷ್ಟರ ವಿರುದ್ಧ ಕಾರ್ಯಾಚರಣೆ ನಡೆಸದೆ ಸುಮ್ಮನೆ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮುಖ್ಯವಾಗಿ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ನಮ್ಮ ಪ್ರಜಾ ನೆರಳು ಪತ್ರಿಕೆ ಸಾಲು ಸಾಲು ವರದಿಗಳನ್ನು ಪ್ರಕಟಿಸಿದ್ದು ಅದಕ್ಕೆ ಜನಸ್ಪಂದನೆ ವ್ಯಕ್ತವಾಗಿ ಸಾಕಷ್ಟು ದೂರುಗಳು ದಾಖಲಾಗಿದ್ದರೂ, ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತವರ ತಂಡ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ಹಲವು ಅನುಮಾನಗಳನ್ನು ಮೂಡಿಸುತ್ತಿವೆ. ಕನಿಷ್ಠ ಈ ಲೇಖನದಿಂದಾದರೂ ಅವರು ಎಚ್ಚೆತ್ತು ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಅವರುಗಳನ್ನು ಕಾನೂನಿನಡಿ ಶಿಕ್ಷೆಯಾಗುವಂತೆ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಒಟ್ಟಿನಲ್ಲಿ ಅತ್ಯುತ್ತಮ ಸ್ವಾಯುತ್ತ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಲೋಕಾಯುಕ್ತದ ಬಗ್ಗೆ ಸಾಮಾನ್ಯ ಜನರು ಈಗಲೂ ಬೆಟ್ಟದಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಪ್ರಸ್ತುತ ಲೋಕಾಯುಕ್ತರಾದ ಬಿ.ಎಸ್ ಪಾಟೀಲರು ಎನ್ ವೆಂಕಟಾಚಲಯ್ಯ ಹಾಗೂ ಸಂತೋಷ್ ಹೆಗ್ಡೆ ಅವರ ಮಾದರಿಯಲ್ಲಿ ಕಾರ್ಯನಿರ್ವಹಿಸಿ ಮತ್ತೆ ಸಂಸ್ಥೆಗೆ ಮರಳಿ ಅದೇ ಘನತೆಯನ್ನು ತಂದು ಕೊಡಬೇಕು. ಭ್ರಷ್ಟಾಚಾರ ನಿಗ್ರಹದ ಜೊತೆ ಜೊತೆಗೆ ಸರ್ಕಾರಿ ನೌಕರರ ಕಾರ್ಯನಿರ್ವಹಣೆ ಕುರಿತೂ ನಿಗಾವಹಿಸಬೇಕು ಎನ್ನುವುದು ಪ್ರಜಾನೆರಳು ಪತ್ರಿಕೆಯ ಕಳಕಳಿಯಾಗಿದೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon