ಬೆಂಗಳೂರು, ಜೂನ್ ೧೬- ಕಾಂಗ್ರೆಸ್ ನಲ್ಲಿ ಜಾತಿ ಜನಗಣತಿ ವಿಚಾರ ಮತ್ತೊಮ್ಮೆ ಕಿಚ್ಚೆಬ್ಬಿಸಿದೆ. ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಶಾಸಕ ಯತೀಂದ್ರ ಸಿದ್ದರಾಮಯ್ಯ ಜಾತಿಗಣತಿ ವಿಷಯ ಮುಂದಿಟ್ಟುಕೊಂಡು ಪರೋಕ್ಷವಾಗಿ ಕಿಡಿ ಕಾರಿದ್ದಾರೆ. ಕರಡಿಕೊಪ್ಪಲಿನಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಿಂದುಳಿದವರ ಸಂಖ್ಯೆ ಎಷ್ಟಿದೆ, ಅದಕ್ಕೆ ತಕ್ಕಂತೆ ಅವರು ಅಭಿವೃದ್ಧಿ ಆಗಿದ್ದಾರಾ ಇಲ್ಲವಾ, ಅವರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗಳೇನು ಎಂಬ ಬಗ್ಗೆ ಅಧ್ಯಯನ ಮಾಡಿ ಜಾತಿ ಜನಗಣತಿ ವರದಿಯನ್ನು ತಯಾರಿಸಿ ಕೊಟ್ಟಿದ್ದಾರೆ. ಆ ವರದಿ ಜಾರಿ ಆಗಿದ್ದಿದ್ದರೆ ಇವತ್ತು ಹಿಂದುಳಿದವರಿಗೆ ಒಂದು ಶಕ್ತಿ ಬಂದಿರುತ್ತಿತ್ತು ಎಂದು ಯತೀಂದ್ರ ಹೇಳಿದರು.
ಮುಂದುವರಿದು ಮಾತನಾಡಿದ ಅವರು, ಆದರೆ ಕೆಲ ವರ್ಗದವರ ಪ್ರಬಲ ವಿರೋಧದಿಂದಾಗಿ ನಾವದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ. ವರದಿ ೧೦ ವರ್ಷ ಹಳೆಯದು, ಜನಸಂಖ್ಯೆ ಸರಿಯಾಗಿ ನಮೂದಾಗಿಲ್ಲ ಅಂತ ಚಿಕ್ಕ ಪುಟ್ಟ ನೆಪಗಳನ್ನೇ ಮುಂದೆ ಮಾಡಿ ಜಾತಿ ಗಣತಿ ಅನುಷ್ಠಾನವಾಗದಂತೆ ತಡೆದಿದ್ದಾರೆ. ಎಂದು ಯತೀಂದ್ರ ಆರೋಪಿಸಿದರು.