ಬೆಳಗಾವಿ: ಕೆ.ಆರ್.ಐ.ಡಿ.ಎಲ್. (ಕರ್ನಾಟಕ ರೂರಲ್ ಇನಫ್ರಾಸ್ಟ್ರಕ್ಚರ್ ಡೆವಲಪಮೆಂಟ್ ಲಿಮಿಟೆಡ್) ವತಿಯಿಂದ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದರು.
ನಗರದ ಕೆ.ಆರ್.ಐ.ಡಿ.ಎಲ್ ವಲಯ ಕಚೇರಿಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ನಿಯಮಾನುಸಾರ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸೂಚಿಸಿದರು.
ಅನುಮೋದನೆ ಆಗಿದ್ದರು ಕೂಡ ಇನ್ನೂ ಆರಂಭವಾಗದ ಕಾಮಗಾರಿಗಳಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಮೊದಲ ಆದ್ಯತೆ ನೀಡಿ ಭೇಟಿ ನೀಡಬೇಕು. ಕಾಮಗಾರಿಗಳು ಆರಂಭವಾಗದಿರಲು ಇರುವ ಕಾರಣಗಳ ಬಗ್ಗೆ ತಿಳಿದುಕೊಂಡು, ಅವುಗಳನ್ನು ಇತ್ಯರ್ಥಪಡಿಸಿಕೊಂಡು ತ್ವರಿತವಾಗಿ ಕಾಮಗಾರಿ ಆರಂಭಿಸಬೇಕು ಎಂದು ನಿರ್ದೇಶನ ನೀಡಿದರು.
ಗುಣಮಟ್ಟದ ಕಾಮಗಾರಿ ಕೈಗೊಳ್ಳಿ:
ಕಾಮಗಾರಿಗಳ ಉದ್ಘಾಟನೆ ಸಂದರ್ಭದಲ್ಲಿ ಅಳವಡಿಸುವ ಶಿಲಾಫಲಕಗಳಲ್ಲಿ ಕಡ್ಡಾಯವಾಗಿ ನಿಯಮಾನುಸಾರ (ಪ್ರೋಟೋಕಾಲ್) ಸಂಬಂಧಪಟ್ಟವರ ಹೆಸರುಗಳನ್ನು ಬರೆಸಬೇಕು. ಸಾರ್ವಜನಿಕರಿಂದ ದೂರುಗಳು ಬಾರದಂತೆ ಸಮರ್ಪಕ ಹಾಗೂ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಹೇಳಿದರು.
ವಿವಿಧ ಪ್ರಗತಿ ಯೋಜನೆಗಳಲ್ಲಿ ಪ್ರಗತಿ ಸಾಧಿಸಿ:
ಗ್ರಾಮ ವಿಕಾಸ ಯೋಜನೆ, ಮಲೆನಾಡು ಅಭಿವೃದ್ಧಿ ಯೋಜನೆ, ಬಯಲುಸೀಮೆ ಅಭಿವೃದ್ಧಿ ಯೋಜನೆ ಸೇರಿ ವಿವಿಧ ಯೋಜನೆಗಳಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಕುರಿತು ಮಾಹಿತಿ ಪಡೆದು, ಪ್ರಗತಿ ಸಾಧಿಸಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಸವರಾಜ ಅಡವಿಮಠ (ಅಭಿವೃದ್ಧಿ), ಕೆ.ಆರ್.ಐ.ಡಿ.ಎಲ್. ಅಧೀಕ್ಷಕ ಅಭಿಯಂತರ ಸಿದ್ಧಾರ್ಥ ಎಸ್, ಬೆಳಗಾವಿ ಕಾರ್ಯಪಾಲಕ ಅಭಿಯಂತರ ಎಸ್.ಬಿ. ಶೇಗುಣಸಿ, ಚಿಕ್ಕೋಡಿ ಕಾರ್ಯಪಾಲಕ ಅಭಿಯಂತರ ಆರ್.ಪಿ. ನಾರಾಯಣಕರ್ ಸೇರಿ ಎಲ್ಲ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು ಹಾಗೂ ಇನ್ನಿತರ ಸಿಬ್ಬಂದಿ ಹಾಜರಿದ್ದರು.















