ಬೆಂಗಳೂರು: ನಗರದಲ್ಲಿ ನಡೆದ ಭಾರೀ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್ ನಾಯಕ್ ಸೇರಿ ಮೂವರು ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಸಿಎಲ್7 ಮತ್ತು ಮೈಕ್ರೋ ಬ್ರೇವರಿ ಲೈಸೆನ್ಸ್ ನೀಡುವ ನೆಪದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್ ನಾಯಕ್, ಬ್ಯಾಟರಾಯನಪುರ ವಲಯದ ಸೂಪರಿಂಟೆಂಡೆಂಟ್ ತಮ್ಮಣ್ಣ, ಹಾಗೂ ಕಾನ್ಸ್ಟೇಬಲ್ ಲಕ್ಕಪ್ಪ ಮೂವರನ್ನು ಬಂಧಿಸಲಾಗಿದೆ.
ಬೆಂಗಳೂರು ಮೂಲದ ಲಕ್ಷ್ಮೀ ನಾರಾಯಣ್ ಎಂಬ ಉದ್ಯಮಿಯಿಂದ ಸಿಎಲ್7 ಹಾಗೂ ಮೈಕ್ರೋ ಬ್ರೇವರಿ ಲೈಸೆನ್ಸ್ ನೀಡಲು ಅಧಿಕಾರಿಗಳು ಎರಡು ಲೈಸೆನ್ಸ್ ನೀಡಲು 80 ಲಕ್ಷ ರೂಪಾಯಿ ಲಂಚಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಅದರ ಭಾಗವಾಗಿ, ಅಡ್ವಾನ್ಸ್ ಹಣವಾಗಿ 25 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನೂ ಬಲೆಗೆ ಬೀಳಿಸಿದ್ದಾರೆ.
ಈ ದಾಳಿ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಅಬಕಾರಿ ಭವನದಲ್ಲಿ ನಡೆದಿದ್ದು, ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಉಪ ಆಯುಕ್ತ ಜಗದೀಶ್ ನಾಯಕ್ ಮತ್ತು ಅಬಕಾರಿ ಕಾನ್ಸ್ಟೇಬಲ್ ಲಕ್ಕಪ್ಪರನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ. ಇನ್ನೊಂದೆಡೆ, ದಾಳಿ ಸಮಯದಲ್ಲಿ ತಪ್ಪಿಸಿಕೊಂಡಿದ್ದ ಅಬಕಾರಿ ಸೂಪರಿಂಟೆಂಡೆಂಟ್ ತಮ್ಮಣ್ಣ ಅವರನ್ನು ನಂತರ ವೈಯಾಲಿಕಾವಲ್ ಪ್ರದೇಶದಲ್ಲಿ ಬಳಿ ಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಭವನಕ್ಕೆ ಕರೆತಂದಿದ್ದಾರೆ.
ಮೂವರ ಮೇಲೂ ವಿಚಾರಣೆ ಮುಂದುವರೆದಿದ್ದು, ಸದ್ಯ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಭವನದಲ್ಲೇ ಮೂವರು ಅಧಿಕಾರಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ಅಬಕಾರಿ ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಕಾರಿಗಳ ಪಾತ್ರ ಬಹಿರಂಗವಾಗುವ ಸಾಧ್ಯತೆ ಇದೆ.
ಲೋಕಾಯುಕ್ತ ದಾಳಿ ಶ್ಲಾಘನೀಯ:
ಈ ಲೋಕಾಯುಕ್ತ ದಾಳಿ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮತ್ತೊಂದು ದೊಡ್ಡ ಉದಾಹರಣೆಯಾಗಿ ಪರಿಗಣಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೂಡ ಸಾಕಷ್ಟು ಭ್ರಷ್ಟ ಅಧಿಕಾರಿಗಳಿದ್ದು, ಅವರುಗಳ ವಿರುದ್ಧವೂ ಇದೇ ಮಾದರಿಯಲ್ಲಿ ಕಾರ್ಯಾಚರಣೆ ಆಗಬೇಕಿದೆ. ಇಂದು ನೆಡೆದ ಲೋಕಾಯುಕ್ತ ದಾಳಿ ಶ್ಲಾಘನೀಯವಾಗಿದ್ದು, ಜನರು ಕೂಡ ಇದಕ್ಕೆ ಸಂತಸ ವ್ಯಕ್ತಪಡಿದ್ದಾರೆ.
ಲೋಕಾಯುಕ್ತ ಎಸ್.ಪಿ ಶಿವಪ್ರಕಾಶ್ ದೇವರಾಜ್ ಹೇಳಿಕೆ:
ಕಾರ್ಯಾಚರಣೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಲೋಕಾಯುಕ್ತ ಎಸ್.ಪಿ ಶಿವಪ್ರಕಾಶ್ ದೇವರಾಜ್, ಅಬಕಾರಿ ಇಲಾಖೆಯ ಡಿ.ಸಿ ಹಾಗೂ ಅಧೀಕ್ಷಕರಿಂದ ಲಂಚ ಕೇಳುತ್ತಿರುವುದಾಗಿ ಬಂದ ದೂರಿನ ಮೇರೆಗೆ ಕಾರ್ಯಪ್ರವೃತ್ತಗೊಂಡೆವು. 80 ಲಕ್ಷಕ್ಕೆ ಡಿಮ್ಯಾಂಡ್ ಮಾಡಿ 25 ಲಕ್ಷ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 7ಎ ಅಡಿಯಲ್ಲಿ ಮೂವರನ್ನ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ದೂರುದಾರರು ಸರ್ಕಾರಿ ಶುಲ್ಕ ಪಾವತಿಸಿದರೂ ಕಡತಕ್ಕೆ ಸಹಿ ಮಾಡಲು ಡಿ.ಸಿ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮುಂದುವರೆದು ಬಂಧಿತ ಸರ್ಕಾರಿ ಅಧಿಕಾರಿಗಳ ಮನೆಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.















