ಧಾರವಾಡ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಅಂದಾನಗೌಡ ಎಸ್. ಪಾಟೀಲಗೆ ನಾಲ್ಕು ವರ್ಷ ಜೈಲು ಮತ್ತು 1 ಲಕ್ಷ ದಂಡವನ್ನು ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ವಿಶೇಷ ಕೋರ್ಟ್ ವಿಧಿಸಿದೆ. 51.72 ಲಕ್ಷ ಮೌಲ್ಯದ ಆಸ್ತಿ ಮುಟ್ಟುಗೋಲಿಗೆ ಆದೇಶಿಸಿದೆ.
ಅಂದಾನಗೌಡ ಎಸ್. ಪಾಟೀಲ ಹುಬ್ಬಳ್ಳಿಯ ನಿವಾಸಿಯಾಗಿದ್ದಾರೆ. ಅವರು ಸೇವಾ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚುವರಿಯಾಗಿ 3.52 ಕೋಟಿ ಅಂದರೆ ಶೇ 151.13 ರಷ್ಟು ಅಕ್ರಮ ಸಂಪಾದನೆ ಮಾಡಿದ್ದು ಸಾಬೀತಾಗಿದ್ದರಿಂದ ನ್ಯಾಯಾಧೀಶೆ ಜರೀನಾ ಅವರು ಈ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ: ಸೇವಾ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಅಂದಾನಗೌಡ ಪಾಟೀಲ ವಿರುದ್ಧ ಅವರ 2014 ಆಗಸ್ಟ್ 6ರಂದು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ಎಸ್. ಪಿ ಕೆ.ಪರಶುರಾಮ, ಇನ್ಸ್ಪೆಕ್ಟರ್ ಶಂಕರಗೌಡ ಎಸ್ ಬಸನಗೌಡ್ರ ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.















