ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪೆಟ್ರೋಲಿಯಂ ಉತ್ಪನ್ನಗಳಿಂದ ಬರುವ ತೆರಿಗೆ ವಂಚಿಸಿ, ಅಕ್ರಮವಾಗಿ ಡೀಸೆಲ್ ಸಾಗಿಸುತ್ತಿದ್ದ ಖದೀಮರ ಗ್ಯಾಂಗ್ ಬೇಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಲ್ಫ್ ದೇಶಗಳಿಂದ ಚಿನ್ನ ಕಳ್ಳಸಾಗಣೆ ಮಾಡುವ ಬಗ್ಗೆ ಆಗಾಗ ಪ್ರಕರಣಗಳು ವರದಿ ಆಗುವುದನ್ನು ನೋಡಿದ್ದೇವೆ. ಈಗ ಅದೇ ಗಲ್ಫ್ ದೇಶಗಳಿಂದ ಕರ್ನಾಟಕಕ್ಕೆ ಡೀಸೆಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಜಾಲವೊಂದು ಬೆಳಗಾವಿಯಲ್ಲಿ ಪತ್ತೆಯಾಗಿದೆ. ಜನವರಿ 16ರಂದು ಖಚಿತ ಮಾಹಿತಿ ಮೇರೆಗೆ ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಮೇಲೆ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದ ಪೊಲೀಸ್ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ, ಯಾವುದೇ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಡೀಸೆಲ್ ವಶಕ್ಕೆ ಪಡೆದಿದೆ.
ದಾಳಿಯ ವೇಳೆ ಸುಮಾರು 15 ಲಕ್ಷ ರೂ. ಮೌಲ್ಯದ 17 ಸಾವಿರ ಲೀಟರ್ ಡೀಸೆಲ್ ಹಾಗೂ ಟ್ಯಾಂಕರ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜತೆಗೆ, ಟ್ಯಾಂಕರ್ ಚಾಲಕನನ್ನು ಕೂಡ ಬಂಧಿಸಲಾಗಿದ್ದು, ತನಿಖೆ ವೇಳೆ ತುಮಕೂರು ಮೂಲದ ಟ್ಯಾಂಕರ್ ಮಾಲೀಕ ಅರಿಹಂತ ಎಂಬಾತನ ಪಾತ್ರ ಬೆಳಕಿಗೆ ಬಂದಿದ್ದು, ಇದು ದೊಡ್ಡಮಟ್ಟದ ಸ್ಮಗ್ಲಿಂಗ್ ಜಾಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಮಾಧ್ಯಮದವರಿಗೆ ಮಾಹಿತಿ ನೀಡಿ, ”ಮೋಟರ್ ಸ್ಪಿರಿಟ್ ಆಯಂಡ್ ಹೈ ಸ್ಪೀಡ್ ಡೀಸೆಲ್ ರೆಗ್ಯುಲೇಶನ್ ಸಪ್ಲೈ ಆಂಡ್ ಡಿಸ್ಟ್ರಿಬುಶನ್ ಆಯಡ್ ಪ್ರಿವೆನ್ಷನ್ ಆಫ್ ಮಾಲ್ ಪ್ರಾಕ್ಟಿಸಸ್ ಆರ್ಡರ್ 2005 ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಟ್ಯಾಂಕರ್ ಚಾಲಕ ರಾಜಸ್ಥಾನ ಮೂಲದ ದಿನೇಶ್ಕುಮಾರ್ ಭಾಗಿರತ್ ರಾಮಜಿ ಎಂಬವನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ರಾಜಸ್ಥಾನ ಮೂಲದ ಸುಖದೇವ್ ಬಿಯಾರಾಮ್, ಮಹಾರಾಷ್ಟ್ರ ಮೂಲದ ಇಸ್ತಿಯಾಕ್ ಶೇಖ್, ಕುಂದನ್ ಮಾತ್ರೆ, ಸಮೀರ ಪರಾಂಗೆ, ಪ್ರವೀಣ ಔತಿ ಹಾಗೂ ತುಮಕೂರು ಮೂಲದ ಅರಿಹಂತ ಎಂಬಾತ ಕೂಡ ಭಾಗಿಯಾಗಿದ್ದಾರೆ. ಅವರನ್ನು ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.
ಗಲ್ಫ್ ರಾಷ್ಟ್ರಗಳಿಂದ ಪೆಟ್ರೋಲಿಯಂ ಉತ್ಪನ್ನ ಆಮದು ಸಂದರ್ಭದಲ್ಲಿ ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಳ್ಳಲಾಗುತ್ತಿದೆ. ಅಕ್ರಮವಾಗಿ ತರಲಾಗುತ್ತಿರುವ ಈ ಡೀಸೆಲ್ ಅನ್ನು ಕಾಳಸಂತೆಯಲ್ಲಿ ಅರ್ಧ ದರಕ್ಕೆ ಮಾರಾಟ ಮಾಡುತ್ತಿರುವುದು ಸ್ಪಷ್ಟವಾಗಿದೆ. ಡೀಸೆಲ್ ಎಲ್ಲೆಲ್ಲಿ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದಲೇ ಗೊತ್ತಾಗಬೇಕಿದೆ. ಈ ರೀತಿ ಮಹಾರಾಷ್ಟ್ರದಲ್ಲೂ ಒಂದು ಪ್ರಕರಣ ದಾಖಲಾಗಿದೆ” ಎಂದು ವಿವರಿಸಿದ್ದಾರೆ.
ಪಿಎಸ್ ಐಗಳಾದ ಹೊನ್ನಪ್ಪ ತಳವಾರ, ಶ್ರೀಶೈಲ್, ಉದಯ ಪಾಟೀಲ, ಪಿ. ಎಂ. ಮೋಹಿತೆ, ಸಿಬ್ಬಂದಿಗಳಾದ ಎಂ.ಜಿ. ಕುರೇರ, ಸಿ.ಐ. ಚಿಗರಿ, ಕೆ.ಬಿ. ಗೌರಾಣಿ, ಆರ್.ಜಿ. ಜಿನ್ನೇಜಿ, ಗೋಪಾಲ ಲಟ್ಟಿ ಸಿದ್ದನಾಥ ಮರಾಠ, ದೀಪಕ ಬಿಚಗತ್ತಿ, ದ್ಯಾಮಣ್ಣ ಮುರಗೋಡ, ಮಂಜುನಾಥ ಮಾಳೇದ ಹಾಗೂ ಬಸವರಾಜ ಕುಳ್ಳೋಳ್ಳಿ ಕಾರ್ಯಾಚರಣೆ ನೆಡೆಸಿದ ತಂಡದಲ್ಲಿ ಇದ್ದರು ಎಂದು ಭೂಷಣ ಬೊರಸೆ ಮಾಹಿತಿ ನೀಡಿದ್ದಾರೆ.
ಇನ್ಸ್ಪೆಕ್ಟರ್ ಗಡ್ಡೇಕರ್ ಕಾರ್ಯತತ್ಪರತೆಗೆ ಮೆಚ್ಚುಗೆ:
ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ಅವರು ಈ ಹಿಂದೆ ಕೂಡ ಅತ್ಯಂತ ಕ್ಲಿಷ್ಟಕರವಾದ ಪ್ರಕರಣಗಳನ್ನು ಭೇದಿಸಿದ್ದು, ವಿವಿಧ ರಾಜ್ಯದ ಪೊಲೀಸರಿಗೆ ಬೇಕಾಗಿದ್ದ ಮತ್ತು ವಿದೇಶಿ ಅಪರಾಧ ತನಿಖಾ ದಳಗಳು ಹುಡುಕುತ್ತಿದ್ದ ಕುಖ್ಯಾತ ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣವೂ ಸೇರಿದಂತೆ ಅವರ ಕಾರ್ಯತತ್ಪರತೆಗೆ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.















