ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಮಲ್ಲೇಶ್ವರದ 8ನೇ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ಕಾಮಗಾರಿ ಕಳೆದೆರಡು ವರ್ಷಗಳಿಂದ ನಡೆಯುತ್ತಿದ್ದು, ಅದರಿಂದ ಅಲ್ಲಿನ ಜನರು ಮತ್ತು ವ್ಯಾಪಾರಸ್ಥರು ತೊಂದರೆಗೀಡಾಗಿ ಹಿಡಿ ಶಾಪ ಹಾಕುತ್ತಿರುವ ವರದಿಗಳು ಸಾಕಷ್ಟು ಬಿತ್ತರವಾಗುತ್ತಿರುವ ಬೆನ್ನಲ್ಲೇ ಅಲ್ಲಿ ತೋಡಿರುವ ಗುಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನೊಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಅನಾಮಿಕ ವ್ಯಕ್ತಿಯ ಸಾವು ವೈಟ್ ಟ್ಯಾಪಿಂಗ್ ನಡೆಯುತ್ತಿರುವ ಮುಖ್ಯರಸ್ತೆಯ 17 ಮತ್ತು 18 ನೇ ಅಡ್ಡ ರಸ್ತೆಯ ಮಧ್ಯ ನಡೆದಿದ್ದು, ದುರ್ಘಟನೆ ತಿಂಗಳ ಹಿಂದೆಯೇ ನಡೆದಿದ್ದರೂ ಯಾವುದೇ ಪ್ರಕರಣವಾಗಲಿ, ದೂರಾಗಲಿ ದಾಖಲಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎನ್ನುವ ಮಾತುಗಳನ್ನು ಸುತ್ತ ಮುತ್ತಲಿನ ಜನರು ಹಾಗೂ ವ್ಯಾಪಾರಸ್ಥರು ಆಡುತ್ತಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಪಡೆಯಲು ಪತ್ರಿಕೆಯ ವರದಿಗಾರರು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಕರೆ ಮಾಡಿ ವಿಚಾರಿಸಿದಾಗ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿತ್ತು. ತದ ನಂತರ ಪೊಲೀಸರೇ ಕರೆ ಮಾಡಿ ಎಸ್ಐ ಮತ್ತು ಠಾಣೆಯ ಸಿಬ್ಬಂದಿಗಳು ವಿಚಾರಣೆ ನಡೆಸಲಾಗಿ ಪ್ರಕರಣ ನಡೆದಿರುವುದು ನಿಜವೆಂದು ಆಸ್ಪತ್ರೆಗೆ ದಾಖಲಾಗಿ ನಂತರ ಕೆಲ ದಿನಗಳ ನಂತರ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು ಆದರೆ ತನಿಖೆಯ ಮುಂದಿನ ಹಂತವನ್ನು ಕೇಳಲಾದಾಗ ಹಾರಿಕೆಯ ಉತ್ತರಗಳನ್ನು ನೀಡುತ್ತಿರುವುದು ಅನುಮಾನಗಳಿಗೆ ಇನ್ನಷ್ಟು ಇಂಬು ನೀಡಿದಂತಾಗಿದೆ.
ಇನ್ನು ಕಾಮಗಾರಿಯ ವಿಳಂಬ ಮತ್ತು ಸಾವೂ ಸೇರಿದಂತೆ ಹಲವು ದುರಂತಗಳು ಸಂಭವಿಸಿದ್ದರೂ ಪಾಲಿಕೆಯ ಅಧಿಕಾರಿಗಳಾಗಲಿ, ಪೊಲೀಸ್ ಸಿಬ್ಬಂದಿಗಳಾಗಲಿ ಯಾವುದೇ ಕ್ರಮ ವಹಿಸದಿರುವುದು ಸೋಜಿಗವಾಗಿದೆ. ಇಡೀ ಕಾಮಗಾರಿ ನೆಡೆಯುವ ಸ್ಥಳಗಳಲ್ಲಿ ನಿಯಮಗಳಂತೆ ಟೆಂಡರ್ ವಿವರವಾಗಲಿ ದುರ್ಘಟನೆ ನೆಡೆದ ಸಂದರ್ಭದಲ್ಲಿ ಸಂಪರ್ಕಿಸಲು ಪಾಲಿಕೆ, ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆಗಳಾಗಲಿ ಈಗಲೂ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಹಾಕಿಲ್ಲದಿರುವುದು ಈ ಎಲ್ಲ ಸಾವು ಸೇರಿದಂತೆ ದುರ್ಘಟನೆಗಳಿಗೆ ಕಾರಣವಾಗಿದೆ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕಾಮಗಾರಿ ಸಾಕಷ್ಟು ವಿಳಂಬ:
ಸುಮಾರು ಎರಡು ವರ್ಷದಿಂದ ನೆಡೆಯುತ್ತಿರುವ ಕಾಮಗಾರಿ ಸುತ್ತ ಮುತ್ತಲಿನ ಜನರಿಗೆ ಮುಖ್ಯ ರಸ್ತೆಯ ವ್ಯಾಪಾರಸ್ಥರಿಗೆ ತಲೆ ನೋವಾಗಿ ಪರಿಣಮಿಸಿದೆ. ಇದರಿಂದ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಂಭವಿಸುತ್ತಿದ್ದು, ಸಣ್ಣ ಪುಟ್ಟ ಅಪಘಾತಗಳಂತು ಸರ್ವೇ ಸಾಮಾನ್ಯವಾಗಿದೆ. ಎಲ್ಲಿಯೂ ಸಂಬಂಧಪಟ್ಟ ಗುತ್ತಿಗೆದಾರನ ವಿವರವಾಗಲಿ, ಪಾಲಿಕೆ ಅಧಿಕಾರಿ ಮತ್ತು ಪೊಲೀಸ್ ಠಾಣೆಯನ್ನು ಸಂಪರ್ಕಿಸುವ ಸಂಖ್ಯೆಗಳು ಇಲ್ಲದಿರುವುದು ಇಲ್ಲಿನ ಪರಿಸ್ಥಿತಿಯ ಕೈಗನ್ನಡಿಯಾಗಿದೆ.
ಅನಾಮಿಕ ವ್ಯಕ್ತಿಯ ಸಾವಿಗೆ ಸಿಗಲಿದೆಯೇ ನ್ಯಾಯ:
ಎಲ್ಲೆಂದರಲ್ಲಿ ಅಗೆದಿರುವ ಗುಂಡಿಯನ್ನು ಮುಚ್ಚದೆ ಹಾಗೆ ಬಿಟ್ಟಿದ್ದರಿಂದ ವ್ಯಕ್ತಿಯ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಬೇಕಾ ಬಿಟ್ಟಿಯಾಗಿ ಹಾಗೆ ಬಿಟ್ಟಿರುವ ಪಿಲ್ಲರ್ ಗಳು ಮತ್ತು ಹಾಗೆಯೇ ಹೊರ ಬಿದ್ದ ಕಬ್ಬಿಣಕ್ಕೆ ಅವರ ತಲೆ ಬಡಿದು ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ದಾಖಲಿಸಲಾಗಿ ಅಲ್ಲಿ ಸಾವಿನ ಜೊತೆಗೆ ಐದಾರು ದಿನ ಸೆಣಸಿ ಸಾವನಪ್ಪಿದ್ದಾರೆ ಎಂದು ಪೋಲೀಸ್ ಮೂಲಗಳಿಂದಲೇ ತಿಳಿದು ಬಂದಿದ್ದು, ಆದರೆ ಯಾವುದೇ ಪ್ರಕರಣ ದಾಖಲಾಗದಿರುವುದು, ಆಸ್ಪತ್ರೆಯೂ ಸಹ ಯಾವುದೇ ಮಾಹಿತಿಯನ್ನು ನೀಡದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಈ ಕುರಿತು ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ಪ್ರಜಾ ನೆರಳು ಪತ್ರಿಕೆಯ ಆಶಯವಾಗಿದೆ.















