ಬೆಳಗಾವಿ: ಸ್ಮಾರ್ಟ್ ಸಿಟಿ ಬೆಳಗಾವಿಯಲ್ಲಿ ತಿಪ್ಪೆಗುಂಡಿ ಮುಕ್ತ ನಗರ ಮಾಡಲು ತಂದಿದ್ದ ಅತ್ಯಾಧುನಿಕ ಯೋಜನೆಯೇ ಈಗ ತಿಪ್ಪೆಗುಂಡಿ ಸೇರಿದೆ. ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರ ವಿಶೇಷ ಆಸಕ್ತಿಯಿಂದ ಜಾರಿಯಾಗಿದ್ದ ‘ಅಂಡರ್ ಗ್ರೌಂಡ್ ಬಿನ್’ ವ್ಯವಸ್ಥೆ ಪಾಲಿಕೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಸಂಪೂರ್ಣ ವಿಫಲವಾಗಿದೆ. ಯೋಜನೆ ಹಳ್ಳಹಿಡಿದ ಪರಿಣಾಮ ಜನ ರಸ್ತೆಯಲ್ಲೇ ಕಸ ಎಸೆಯುವಂತಾಗಿದ್ದು, ನರಕ ಸದೃಶ ವಾತಾವರಣ ನಿರ್ಮಾಣವಾಗಿದೆ.
ಬೆಳಗಾವಿಯ ರಾಣಿ ಚೆನ್ನಮ್ಮ ನಗರದಲ್ಲಿ ಕಸದ ಸಮಸ್ಯೆ ನೀಗಿಸಲು ಅತ್ಯಾಧುನಿಕ ಅಂಡರ್ ಗ್ರೌಂಡ್ ಬಿನ್’ ವ್ಯವಸ್ಥೆಯನ್ನು ಪರಿಚಯಿಸಲಾಗಿತ್ತು. ರಸ್ತೆಯ ಮೇಲೆ ಕಸ ಕಾಣಿಸಬಾರದು, ಸುಂದರ ಪರಿಸರ ಇರಬೇಕು ಎಂಬ ಉದ್ದೇಶದಿಂದ ಶಾಸಕ ಅಭಯ್ ಪಾಟೀಲ್ ಅವರು ಈ ಯೋಜನೆಯನ್ನು ರೂಪಿಸಿದ್ದರು. ಆದರೆ, ಇದನ್ನು ನಿರ್ವಹಿಸಬೇಕಾದ ಮಹಾನಗರ ಪಾಲಿಕೆಯು ಹೊಸ ವ್ಯವಸ್ಥೆಯ ಬಾಯಿಯನ್ನೇ ಕಟ್ಟಿ ಮುಚ್ಚಿ ಹಾಕಿದೆ. ಪರಿಣಾಮವಾಗಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಈ ಹೈಟೆಕ್ ವ್ಯವಸ್ಥೆ ಯಾರಿಗೂ ಉಪಯೋಗವಿಲ್ಲದಂತಾಗಿದ್ದು, ಅಧಿಕಾರಿಗಳ ನೀತಿಗೆ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ.
ಆಧುನಿಕ ಕಸದ ತೊಟ್ಟಿಗಳು ಬಂದ್ ಆಗಿರುವುದರಿಂದ ಅನಿವಾರ್ಯವಾಗಿ ಸಾರ್ವಜನಿಕರು ರಸ್ತೆ ಬದಿಯಲ್ಲೇ ಕಸ ಎಸೆಯುತ್ತಿದ್ದಾರೆ. ಇದರಿಂದಾಗಿ ಇಡೀ ರಾಣಿ ಚೆನ್ನಮ್ಮ ನಗರದ ವಾತಾವರಣ ಗಬ್ಬೆದ್ದು ನಾರುತ್ತಿದೆ. ಪ್ರತಿದಿನ ಇದೇ ರಸ್ತೆಯಲ್ಲೇ ಪಾಲಿಕೆಯ ಅಧಿಕಾರಿಗಳು ಸಂಚರಿಸುತ್ತಿದ್ದರೂ, ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಿಪ್ಪೆಗುಂಡಿ ನಿವಾರಣೆಗೆ ತಂದಿದ್ದ ಯೋಜನೆಯೇ ತಿಪ್ಪೆಗುಂಡಿ ಸೇರಿದಂತಾಗಿದ್ದು, ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ಈ ವ್ಯವಸ್ಥೆಯನ್ನು ಸರಿಪಡಿಸುತ್ತಾ ಅಥವಾ ರೋಗರುಜಿನಗಳಿಗೆ ಆಹ್ವಾನ ನೀಡುತ್ತಾ ಕಾದು ನೋಡಬೇಕಿದೆ.















