ಬೆಳಗಾವಿ: ಜಿಲ್ಲೆಯ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ನಡೆದ ಅಕ್ರಮ ಹಾಗೂ ಭ್ರಷ್ಟಾಚಾರದ ಬಗ್ಗೆ ಪ್ರಜಾ ನೆರಳು ದಿನಪತ್ರಿಕೆ ಸತತವಾಗಿ ವರದಿಗಳನ್ನು ಪ್ರಕಟಿಸಿದ್ದು, ಈಗ ಆ ಸರಣಿಗೆ ಮತ್ತೊಂದು ಸ್ಫೋಟಕ ವರದಿ ಸೇರ್ಪಡೆಯಾಗಿದೆ.
ಗ್ರಾಮ ಪಂಚಾಯಿತಿಯಲ್ಲಿ ಶೇಕಡಾ 90 ರಷ್ಟು ಕೆಲಸಗಳನ್ನು ಕಾನೂನುಬಾಹಿರವಾಗಿಯೇ ಮಾಡಲಾಗುತ್ತದೆ ಎಂದು ಬೆಳಗಾವಿ ತಾಲೂಕಿನ ಮೋದಗಾ ಗ್ರಾಮ ಪಂಚಾಯಿತಿಯ ಪಿಡಿಒ ಪ್ರಶಾಂತ ಮುನವಳ್ಳಿ ಹೇಳಿರುವ ಸ್ಫೋಟಕ ಆಡಿಯೋ ಎಕ್ಸ್ಕ್ಲ್ಯೂಸಿವ್ ಆಗಿ ಪತ್ರಿಕೆಗೆ ಲಭ್ಯವಾಗಿದೆ. ಪಿಡಿಒ ಪ್ರಶಾಂತ ಅವರು ಮತ್ತೊಬ್ಬರೊಂದಿಗೆ ನಡೆಸಿದ ಸಂಭಾಷಣೆ ಇದಾಗಿದ್ದು , ತಾವು ಶೇಕಡಾ 90 ರಷ್ಟು ಸರ್ಕಾರದ ಕೆಲಸಗಳನ್ನು ಕಾನೂನು ಬಾಹಿರವಾಗಿಯೇ ಮಾಡಿರುವುದಾಗಿ ಸ್ವತಃ ಒಪ್ಪಿಕೊಂಡಿರುವುದು ಆಡಿಯೋದಲ್ಲಿದೆ.
ಮನರೇಗಾ ಯೋಜನೆಯಡಿ ನೀವೂ ಬೇಕಾದ್ರೆ ಲಾಭ ಪಡ್ಕೊಳ್ಳಿ ಅಂತಾ ಪಿಡಿಒ ರಾಜಾರೋಷವಾಗಿ ಆ ಕಡೆಯ ವ್ಯಕ್ತಿಗೆ ಹೇಳುತ್ತಾರೆ. ಅಂದರೆ ಬೋಗಸ್ ಮನರೇಗಾ ಪಟ್ಟಿ ತಯಾರಿಸಿ ದುಡ್ಡು ಹೊಡೆಯುವುದು ಇವರ ಉದ್ಧೇಶವಾಗಿದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಬಡವರಿಗೆ ಉದ್ಯೋಗ ಸಿಗಲೆಂದು ಕೇಂದ್ರ ಸರ್ಕಾರ ಜಾರಿ ಮಾಡಿರುವ ಮನರೇಗಾ ಯೋಜನೆಯಲ್ಲಿಯೂ ದುಡ್ಡು ಕೊಳ್ಳೆ ಹೊಡೆಯುವ ಇಂಥ ಭ್ರಷ್ಟ ಪಿಡಿಒಗಳಿಂದ ಬಡವರಿಗೆ ತೀವ್ರ ಅನ್ಯಾಯವಾಗುತ್ತಿದೆ.
ಲೇಔಟ್ ಗಳಿಗೆ ಅನುಮೋದನೆ ನೀಡುವ ವಿಚಾರದಲ್ಲಿ ಭಾರಿ ಪ್ರಮಾಣದ ಲಂಚ ಪಡೆಯುತ್ತಿರುವುದಾಗಿ ಇದೇ ಪಿಡಿಒ ನಾಚಿಕೆ ಬಿಟ್ಟು ಈ ಸಂಭಾಷಣೆಯಲ್ಲಿ ಒಪ್ಪಿಕೊಳ್ಳುತ್ತಾನೆ. ಲೇಔಟ್ ಗಳಿಗೆ ಅನುಮತಿ ನೀಡಲು ಡೆವಲಪರ್ ಕಡೆಯಿಂದ ಲಕ್ಷ ಲಕ್ಷ ಲಂಚ ಪಡೆಯುತ್ತಿರುವುದಾಗಿ ಹೇಳಿರುವುದು ಕೂಡ ಆಡಿಯೋದಲ್ಲಿ ಬಹಿರಂಗವಾಗಿದೆ.
ಈ ಮೊದಲು ಆಡಿಯೋ ಬಹಿರಂಗಪಡಿಸಿದ್ದ ಪತ್ರಿಕೆ:
ಜಿಲ್ಲಾ ಪಂಚಾಯತ್ ಸಿಇಒ ಆಗಿರುವ ರಾಹುಲ್ ಶಿಂದೆ ಸಾಹೇಬರು ಈ ಬಗ್ಗೆ ತಕ್ಷಣ ಗಮನಹರಿಸಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ತಾಪಂ ಇಒ ಯಶವಂತ ಅವರು ಕೂಡ ಇಂಥ ಭ್ರಷ್ಟ ಪಿಡಿಓಗಳ ಬಗ್ಗೆ ಸಮಗ್ರವಾಗಿ ವರದಿ ತರಿಸಿಕೊಂಡು ಕ್ರಮಕ್ಕೆ ಮುಂದಾದರೆ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಒಂದಿಷ್ಟು ಕಡಿಮೆ ಮಾಡಬಹುದು. ಇದಕ್ಕೂ ಮುನ್ನ ಪಾರವಾಡ ಗ್ರಾಪಂ ಭ್ರಷ್ಟ ಪಿಡಿಒ ವಿರೇಶ ಸಜ್ಜನ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಡಿಯೋವನ್ನು ಪತ್ರಿಕೆ ಬಹಿರಂಗ ಪಡಿಸಿತ್ತು.















